ನಾಡು ಅಕ್ರೋಟು -
	ಯೂಫೋರ್ಬಿಯೇಸೀ ಕುಟುಂಬಕ್ಕೆ ಸೇರಿದ ಒಂದು ಮರ. ಆಲ್ಯೂರೈಟಿಸ್ ಮಾಲಕಾನ ಇದರ ಶಾಸ್ತ್ರೀಯ ನಾಮ. ಇದು ಏಷ್ಯದ ಉಷ್ಣವಲಯ, ಇಂಡೋ-ಮಲಯ ಪ್ರದೇಶದ ಮೂಲನಿವಾಸಿ. ಅಸ್ಸಾಮ್, ಬರ್ಮ ಮತ್ತು ದಕ್ಷಿಣ ಭಾರತದಲ್ಲಿ ಕಾಣಬರುತ್ತದೆ. ಇದು ಸುಮಾರು 20 ಮೀ. ಎತ್ತರಕ್ಕೆ ಬೆಳೆಯುವ ನಿತ್ಯಹಸುರಿನ ಮರ. ಇದರ ತೊಗಟೆಯ ಬಣ್ಣ ಕಪ್ಪು ಮಿಶ್ರ ಬಿಳಿ ಇಲ್ಲವೆ ಬೂದು. ಎಲೆಗಳು ಸರಳ, ಪರ್ಯಾಯ ಮಾದರಿಯಲ್ಲಿ ಜೋಡಣೆಗೊಂಡಿದೆ. ಹೂಗಳು ಅಕ್ಟೋಬರ್-ಜನವರಿ ತಿಂಗಳ ಅವಧಿಯಲ್ಲಿ ಅರಳುವುವು. ಕಾಯಿ ಅಂಡಾಕಾರದ್ದು. ಸಿಪ್ಪೆ ಗಟ್ಟಿ. ಒಳಗೆ ಒಂದು ಅಥವಾ ಎರಡು ಬೀಜಗಳುಂಟು. ನೋಡಲು ಅಕ್ರೋಟಿನಂತಿರುವುವು.

	ನಾಡು ಅಕ್ರೋಟಿನ ಕಾಯಿಂದ ಎಣ್ಣೆ ತೆಗೆದು ಹಿಂಡಿಯನ್ನು ಗೊಬ್ಬರವಾಗಿ ಬಳಸಲಾಗುತ್ತದೆ. ಎಣ್ಣೆಯು ಬಣ್ಣ ಮತ್ತು ಮೆರುಗೆಣ್ಣೆಯ ತಯಾರಿಕೆಗೆ ಉಪಯುಕ್ತ. ಇದು ಒಳ್ಳೆಯ ರೇಚಕ. ಅಲ್ಲದೆ ಇದನ್ನು ಸಾಬೂನು ತಯಾರಿಕೆಯಲ್ಲಿಯೂ ಬಳಸುವುದುಂಟು. ತಿರುಳಿನಿಂದ ಪಡೆಯಲಾದ ಅಂಟನ್ನು ಮೇಣದ ಬತ್ತಿ ತಯಾರಿಕೆಗೆ ಬಳಸಲಾಗುತ್ತದೆ. ಚೌಬೀನೆಯಿಂದ ದೋಣಿ ತಯಾರಿಸುವುದಿದೆ. ತೊಗಟೆಯಿಂದ ಟ್ಯಾನಿನನ್ನು ಪಡೆಯಲಾಗುತ್ತದೆ. ಮರದಿಂದ ಬೆಂಕಿಕಡ್ಡಿ ತಯಾರಿಸುವುದುಂಟು. ಅಲ್ಲದೆ ನಾಡು ಅಕ್ರೋಟು ಮರವನ್ನು ಉದ್ಯಾನವನಗಳಲ್ಲಿ ಅಲಂಕಾರದ ಗಿಡವಾಗಿ ಬೆಳೆಸಲಾಗುತ್ತದೆ. ಇದನ್ನು ಬೀಜಗಳ ಮೂಲಕ ವೃದ್ಧಿಸಬಹುದು.								
		(ಎಂ.ಎಚ್.ಎಂ.)
ಪರಿಷ್ಕರಣೆ : ಹರೀಶ್ ಭಟ್

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ